ಧೃತರಾಷ್ಟ್ರ
  	ಚಂದ್ರವಂಶದ ರಾಜ ವಿಚಿತ್ರವೀರ್ಯನ ಕ್ಷೇತ್ರಜಪುತ್ರ.  ವಿಚಿತ್ರವೀರ್ಯನ ಮರಣಾನಂತರ ಆತನ ಮಡದಿಯಲ್ಲಿ ವ್ಯಾಸನ ಅನುಗ್ರಹದಿಂದ ಜನಿಸಿದವ.  ಗಂಧರ್ವಾಂಶ  ಸಂಭೂತ ತಾಯಿಯ ದೋಷದಿಂದ ಹುಟ್ಟುಕುರುಡನಾದ ಈತನಿಗೆ ವೈಚಿತ್ರವೀರ್ಯ, ಅಂಬಿಕೇರ್ಯ, ಪ್ರe್ಞÁಚಕ್ಷು, ಅಜಮೀಢ ಎಂಬ ಹೆಸರುಗಳೂ ಇದ್ದುವು.  ಗಾಂಧಾರ ದೇಶದ ಸುಬಲ ರಾಜನ ಪುತ್ರಿಯರಾದ ಗಾಂಧಾರಿ, ಸತ್ಯವ್ರತಾ, ಸತ್ಯಸೇನಾ, ಸುದೇಷ್ಣಾ, ಸಂಹಿತಾ, ತೇಜಶ್ಶ್ರವಾ, ನಿಕೃತಿ, ಶುಭಾ, ಶಂಭರಾ, ದಶಾರ್ಣಾ ಎಂಬ ಹನ್ನೊಂದು ಜನರನ್ನು ಮದುವೆಯಾದ.  ಪಟ್ಟದ ರಾಣಿ ಗಾಂಧಾರಿಯಿಂದ ದುರ್ಯೋಧನನೇ ಮೊದಲಾದ ನೂರು ಮಂದಿ ಪುತ್ರರನ್ನೂ ದುಶ್ಶಲೆ ಎಂಬ ಒಬ್ಬ ಪುತ್ರಿಯನ್ನೂ ಪಡೆದ.  ಒಬ್ಬ ದಾಸಿಯ ಮೂಲಕ ಯುಯುತ್ಸುವೆಂಬ ಪುತ್ರನನ್ನೂ ಪಡೆದ.  ದುಶ್ಶಲೆಯನ್ನು ಸಿಂಧುದೇಶದ ರಾಜ ವೃದ್ಧಕ್ಷತ್ರನ ಮಗನಾದ ಜಯದ್ರಥನಿಗೆ ಕೊಟ್ಟು ಮದುವೆಮಾಡಿದ.  ಪಾಂಡುವಿನ ಮರಣಾನಂತರ ತನ್ನನ್ನು ಬಂದು ಸೇರಿದ ಪಾಂಡವರಿಗೆ ತನ್ನ ಮಕ್ಕಳೊಡನೆ ವಿದ್ಯಾಭ್ಯಾಸ ಮಾಡಿಸಿದ.  ಧರ್ಮರಾಯನಿಗೆ ಯುವರಾಜಪದವಿಯನ್ನು ಕಟ್ಟಿದ.  ದುರ್ಯೋಧನನ ಕುತಂತ್ರದಿಂದ ಪಾಂಡವರು ಅರಗಿನಮನೆಯಲ್ಲಿ ಸುಟ್ಟರೆಂದು ಕೇಳಿ ದುಃಖಿಸಿದ.  ದ್ರೌಪದೀ ಸ್ವಯಂವರಾನಂತರ, ಪಾಂಡವರು ಜೀವಿಸಿರುವುದನ್ನು ತಿಳಿದು ಅವರನ್ನು ಹಸ್ತಿನಾವತಿಗೆ ಕರೆತರಲು ಆಜ್ಞೆಮಾಡಿದ.  ಪಾಂಡವರಿಗೆ ಅರ್ಧರಾಜ್ಯವನ್ನು ಹಂಚಿಕೊಟ್ಟು ಇಂದ್ರಪ್ರಸ್ಥಕ್ಕೆ ಕಳಿಸಿಕೊಟ್ಟ.

ದುರ್ಯೋಧನನ ಮೋಹಕ್ಕೊಳಗಾಗಿ ದ್ಯೂತಸಭೆಯನ್ನು ನಿರ್ಮಿಸಲು ಅನುಮತಿಯನ್ನಿತ್ತು ಪಾಂಡವರನ್ನು ಕರೆತರಲು ವಿದುರನನ್ನು ಕಳಿಸಿದ.  ದುರ್ಯೋಧನನಿಗೆ ವಿವೇಕ ಹೇಳುವಂತೆ ವ್ಯಾಸನನ್ನು ಬೇಡಿಕೊಂಡ.  ಪಾಂಡವರೊಡನೆ ರಾಜಿಮಾಡಿಕೊಳ್ಳುವಂತೆ ಭೀಷ್ಮ, ದ್ರೋಣ, ವಿದುರಾದಿಗಳಿಂದ ಉಪದೇಶ ಪಡೆದು ದುರ್ಯೋಧನನಿಗೆ ಬುದ್ದಿ ಹೇಳಿದ.  ಸಂಧಾನಕ್ಕಾಗಿ ಆಗಮಿಸಿದ ಶ್ರೀಕೃಷ್ಣನ ಸ್ವಾಗತಕ್ಕಾಗಿ ತಳಿರುತೋರಣಗಳಿಂದ ಬೀದಿಗಳನ್ನು ಅಲಂಕರಿಸಲು ಆಜ್ಞೆ ಮಾಡಿದ.  ಕೃಷ್ಣನನ್ನು ಕಟ್ಟಿಹಾಕಿಸಿದ ಮಗನನ್ನು ನಿಂದಿಸಿದ.  ಕೃಷ್ಣನ ಅನುಗ್ರಹದಿಂದ ದೃಷ್ಟಿ ಪಡೆದು ಶ್ರೀಕೃಷ್ಣನ  ದಿವ್ಯರೂಪವನ್ನು ನೋಡಿದ.  ಆ ದಿವ್ಯರೂಪವನ್ನು ಕಂಡ ಕಣ್ಣುಗಳಿಂದ ಮತ್ತೆ ಇತರರನ್ನು ನೋಡಲೊಲ್ಲದೆ ದೃಷ್ಟಿ ಮತ್ತೆ ಮರೆಯಾಗುವಂತೆ ಬೇಡಿದ.

ಸಂಜಯನ ಮೂಲಕ ಯುದ್ಧ ವಿವರಗಳನ್ನು ಕೇಳಿ ತಿಳಿದುಕೊಂಡ.  ದುರ್ಯೋಧನನು ಹತನಾದ ಸುದ್ದಿಯನ್ನು ಕೇಳಿ ಮೂರ್ಛೆ ಹೋದ.  ಆಗ ಸಂಜಯ, ವಿದುರರು ಬಹುವಾಗಿ ಸಂತೈಸಿದರು.  ಪಾಂಡವರು ಕೃಷ್ಣನ ಜೊತೆಯಲ್ಲಿ ಬಂದು ನಮಸ್ಕರಿಸಲು ಸಿದ್ಧವಾದಾಗ ಧೃತರಾಷ್ಟ್ರನ ದುಃಖವನ್ನು ಅರಿತಿದ್ದ ಶ್ರೀಕೃಷ್ಣ ಭೀಮನಿಗೆ ಬದಲಾಗಿ ಲೋಹದ ಪ್ರತಿಮೆಯನ್ನು ಮುಂದೆ ನಿಲ್ಲಿಸಲು ಅದನ್ನು ಅಪ್ಪಿಕೊಂಡು ಪುಡಿಪುಡಿ ಮಾಡಿದ.  ಅನಂತರ ಕೃಷ್ಣನ ಮಾತಿನಿಂದ ಶಾಂತಿಯನ್ನು ಪಡೆದು ಭೀಮಾದಿಗಳನ್ನು ಸಹಜವಾಗಿ ಆಲಂಗಿಸಿದ.  ವನವಾಸಕ್ಕೆ ತೆರಳಿ ಗಂಗಾತೀರದಲ್ಲಿ ತೀವ್ರ ತಪವನ್ನು ಕೈಗೊಂಡ.  ವ್ಯಾಸರ ಅನುಗ್ರಹದಿಂದ ದೃಷ್ಟಿಯನ್ನು ಪಡೆದು ಗಂಗೆಯಿಂದ ಎದ್ದು ಬಂದ ತನ್ನ ಮಕ್ಕಳು ಮತ್ತು ಬಂಧುಗಳೊಡನೆ ಒಂದು ರಾತ್ರಿ ಕಳೆದ.  ಗಂಗೆಯಲ್ಲಿ ಮಿಂದು ಆಶ್ರಮಕ್ಕೆ ಹಿಂದಿರುಗುವಾಗ ಗಾಂಧಾರಿ, ಕುಂತಿಯರೊಡನೆ ಕಾಳ್ಗಿಚ್ಚನ್ನು ಹೊಕ್ಕು ದೇಹತ್ಯಾಗ ಮಾಡಿದ.

ಕಶ್ಯಪನಿಂದ ಕದ್ರುವಿನಲ್ಲಿ ಜನಿಸಿದ ಒಬ್ಬ ಸರ್ಪರಾಜ.  ಅರ್ಜುನನನ್ನು ಬದುಕಿಸಲೋಸುಗ ಚಿತ್ರಾಂಗಧೆ ಈತನನ್ನು ಸಂಜೀವಕರತ್ನ ಬೇಡಿದಳು.  ಅದಕ್ಕೆ ಈತ ಸಮ್ಮತಿಸದಿರಲಾಗಿ ಬಬ್ರುವಾಹನ ಈತನನ್ನು ಸೋಲಿಸಿ ಸಂಜೀವಕರತ್ನವನ್ನು ಪಡೆದು ಅರ್ಜುನನನ್ನು ಬದುಕಿಸಿದ.

ಒಬ್ಬ ದೇವಗಂಧರ್ವ.  ಮರುತ್ತರಾಜನ ಅಶ್ವಮೇಧಯಾಗವನ್ನು ನಾಶಮಾಡಲು ಇಂದ್ರನಿಂದ ಕಳಿಸಲ್ಪಟ್ಟ ದೂತ.
							(ಬಿ.ವಿ.ವಿ.ಬಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ